Friday, August 4, 2017

ಪ್ರಥಮಂ ವಕ್ರತುಂಡಂಚ ......................!

ಒಂದು ನಾಣ್ಯ ಹಿಡಿದು ಚಿಮ್ಮಿದಾಗ.. ರಾಜ, ರಾಣಿ ಯಾವುದು ಬೇಕಾದರೂ ಬೀಳಬಹುದು.. ನಮ್ಮ ನಮ್ಮ ಭಾಗ್ಯದ ಗೆರೆ ಹೇಗಿರುತ್ತೋ ಹಾಗೆ ಸಾಗುತ್ತದೆ..

ಒಂದು ಶುಭ ಶುಕ್ರವಾರ.. ಆಫೀಸ್ ಕೆಲಸದಲ್ಲಿ ಮುಳುಗಿ ಹೋಗಿದ್ದೆ... ಊಟವಾಗಿತ್ತು.. ತಲೆ ಕೆರೆದುಕೊಳ್ಳಲು ಪುರುಸೊತ್ತು ಇಲ್ಲ ಅಂದರೆ ತಪ್ಪಾಗುತ್ತದೆ.. ಆದರೆ.. ಆ ಕಡೆ ಗಮನ ಹರಿದಿರಲಿಲ್ಲ.. ಸುಮ್ಮನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ.. ಒಂದು ಸಂದೇಶ ಬಂದಿತ್ತು ಮೊಬೈಲಿಗೆ.. 

"ಕಡಿಮೆ ಅವಧಿಯಲ್ಲಿ ಹೊರದೇಶಕ್ಕೆ ಹೋಗಬೇಕಾಗತ್ತೆ.. ಹೋಗ್ತೀಯ".. ನಾ ಯಾವಾಗಲೂ ಎರಡನೇ ಯೋಚನೆ ಅನ್ನೋದೇ ಇಲ್ಲ.. "ಓಕೆ ಹೋಗಿ ಬರುವೆ ಅಂದೇ"

ಅಲ್ಲಿಂದ ಶುರುವಾಯಿತು.. ರೋಲರ್ ಕೋಸ್ಟರ್ ರೈಡ್... 

ಕೆಲವೊಮ್ಮೆ.. ಒಂದು ಕಾರ್ಯ ಆಗಲೇ ಬೇಕು ಎಂದರೆ.. ಎಲ್ಲಾ ಸಲಕರಣೆಗಳು, ಅದಕ್ಕೆ ಪೂರಕವಾದ ಸಿದ್ಧತೆಗಳು ಅರಿವಿಲ್ಲದೆ ತನ್ನ ಜಾಗದಲ್ಲಿ ನಿಲ್ಲುತ್ತಾ ಸಹಕರಿಸುತ್ತದೆ.. 

ಆ ವಾರ ಕೂಡ ಹಾಗೆ ಆಯಿತು.. 

ಬೇಕಾಗಿದ್ದ ಪರವಾನಿಗೆ ಸಿಕ್ಕಿತು.. ಹೊರಡಲು ಬೇಕಾದ ಸಿದ್ಧತೆಗಳು ಮಾತ್ರ ಕಡೆ ಹೊತ್ತಿನ ತನಕ ಕಾಯಲೇ ಬೇಕಾಯಿತು.. 

ಆಫೀಸಿನ ಮಾಮೂಲಿ  ಕೆಲಸಗಳು, ಜರ್ಮನಿಯಲ್ಲಿ ಹೇಳಬೇಕಾದ ವಿಷಯಗಳ ಸಿದ್ಧತೆ, ಪ್ರಯಾಣಕ್ಕೆ ಬೇಕಾದ ಸಿದ್ಧತೆಗಳು, ಜೊತೆಯಲ್ಲಿ ನಾ ಮಾನಸಿಕವಾಗಿ ಸಿದ್ಧತೆಯಾಗಬೇಕಿತ್ತು.. ಆದರೆ ಎಲ್ಲವೂ ಚುಕ್ಕಿಗಳ ತರಹ ತಮ್ಮ ಪಾಡಿಗೆ ತಾವು ನಿಂತಿದ್ದವು... ಅವನ್ನೆಲ್ಲಾ ಒಂದುಗೂಡಿಸುವ ಕೆಲಸ ನಾ ಮಾಡಬೇಕಿತ್ತು.. ಆದರೆ ಅದಕ್ಕೆ ಬೇಕಾಗಿದ್ದ ಸಮಯ.. ನನ್ನ ಬಲಗೈನಲ್ಲಿದ್ದ ಗಡಿಯಾರವನ್ನು ಮೀರಿ ಸಾಗುತ್ತಿತ್ತು... 

ಮಡದಿ, ಮಗಳು ನನಗೆ ನೆನಪಿಸುತ್ತಲೇ ಇದ್ದರು.. ಬೇಕಾದ ಸಿದ್ಧತೆ ಮಾಡಿಕೊಳ್ಳಿ.. ಎಷ್ಟು ಹೊತ್ತಿಗೆ ಹೊರಡಬೇಕು.. ಏನೇನೂ ತರಬೇಕು.. ತಲೆ ಗೂಡಾಗಿತ್ತು ..  ಇಬ್ಬರನ್ನು ಕರೆದುಕೊಂಡು ಒಂದಷ್ಟು ಅಂಗಡಿಗಳಿಗೆ ತಿರುಗಿದೆ.. ಬೇಕಾದ ವಸ್ತುಗಳು ಎಲ್ಲಾ ಬಂದವು.. 

ಎಲ್ಲಾ ಬಂದವು.. ಊಹುಂ.. ಇನ್ನೂ ಇತ್ತು.. ಆದರೆ ಅವೆಲ್ಲಾ ಕೊನೇ ಕ್ಷಣದ ಸಿದ್ಧತೆಗಳು.. ನಾ ಮಾನಸಿಕವಾಗಿ ಸಿದ್ಧತೆ ನೆಡೆಸಿದ್ದೆ.. .. 

ಅಂದು ಬೆಳಗಿನಿಂದ ಎಡಬಿಡದೆ ಓಡಾಟ.. ಒಂದು ಸಾಮಾಜಿಕ ತಾಣದ ಕಾರ್ಯಕ್ರಮಕ್ಕೆ ಫೋಟೋ ತೆಗೆಯಬೇಕಿತ್ತು.. ಅದು ಮುಗಿಸುವ ಹೊತ್ತಿಗೆ ನನ್ನ ಶಾಲಾದಿನಗಳ ಗೆಳತೀ ಕಂ ಸಹೋದರಿ ದೇವತೆಯ ಹಾಗೆ ಬಂದು... ನೀನು ಏನೂ ತಿಂದಿಲ್ಲ .. ನಿನಗಾಗಿ ನಿನ್ನ ಇಷ್ಟವಾದ ಅಕ್ಕಿ ರೊಟ್ಟಿ ತಂದಿದ್ದೀನಿ.. ಪ್ಲೀಸ್ ಬೇಡ ಅನ್ನಬೇಡ.. ಎಂದಾಗ ಕಣ್ಣಲ್ಲಿ ಆನಂದ ಭಾಷ್ಪ.. ನಿಜ ಹೇಳಬೇಕೆಂದರೆ.. ಆ ಅಕ್ಕಿ ರೊಟ್ಟಿ ಇಡೀ ದಿನ ನನ್ನ ಹೊಟ್ಟೆಯನ್ನು ಕಾಪಾಡಿತ್ತು.. ಮತ್ತೆ ನಾ ತಿಂದದ್ದು ರಾತ್ರಿ ೧೧ಕ್ಕೆ.. ಏರ್ಪೋರ್ಟ್ ಗೆ ಹೋಗಲು ಕಾರು ಬಂದಿತ್ತು.. ಆ ಗಡಿಬಿಡಿಯಲ್ಲಿ ನನ್ನ ಮಡದಿ ಮಗಳು ಬಲವಂತಮಾಡಿ ಊಟ ಮಾಡಿಸಿದರು.. ನೀವು ಬೇಗ ಊಟ ಮಾಡಿ ಹೊರಡಿ.. ನಾವು ಆಮೇಲೆ ಮಾಡುತ್ತೇವೆ.. ವಿಮಾನ ಹತ್ತಿದ ಮೇಲೆ ಎಷ್ಟು ಹೊತ್ತಾದರೂ ಸರಿ ಫೋನ್ ಮಾಡಿ ಎಂದರು.. 

ಇದರ ಮಧ್ಯೆ ಮತ್ತೆ ನನ್ನ ಶಾಲಾದಿನಗಳ ಸೋದರಿ.. MTR ಸಿದ್ಧ ತಿನಿಸುಗಳ ಪೊಟ್ಟಣಗಳನ್ನು ತಂದು ಕೊಟ್ಟಳು.. ಆ ದಿನ ನನ್ನ ಹೊಟ್ಟೆಯನ್ನು ಕಾದಿದ್ದು ಅವಳು ಕೊಟ್ಟ ಅಕ್ಕಿ ರೊಟ್ಟಿ.. ಹಾಗೆಯೇ ಜರ್ಮನಿಗೆ ಹೋದಾಗ ಒಂದು ವಾರ ಮತ್ತೆ ನನ್ನ ಹೊಟ್ಟೆಯನ್ನು ಕಾಪಾಡಿದ್ದು ಅವಳು ತಂದುಕೊಟ್ಟಿದ್ದ MTR ಪೊಟ್ಟಣಗಳು :-)

ಮಡದಿ ಸವಿತಾ ಮನದೊಳಗೆ ಖುಷಿ.. ಆದರೆ ತೋರಿಸಿಕೊಳ್ಳುತ್ತಿರಲಿಲ್ಲ.. ಖುಷಿ ವಿಷಯ ಎಂದರೆ.. ನಾ ಮೊದಲ ಬಾರಿಗೆ ಹೊರ ದೇಶಕ್ಕೆ ಹೋಗುತ್ತಿರುವುದು.. ಮಗಳಿಗೆ ನನ್ನ ಬಿಟ್ಟು ಒಂದು ವಾರ ಇರಬೇಕಲ್ಲ ಎನ್ನುವ ಆತಂಕ... 

ಅಮ್ಮ ಖುಷಿ ಪಟ್ಟರು, ಕಣ್ಣಲ್ಲಿ ಆನಂದಭಾಷ್ಪ.. ಅವರ ಹೋರಾಟದ ಜೀವನಕ್ಕೆ ಆ ದೇವರು ಕೊಟ್ಟ ವರ ಅನ್ನಿಸಿತು.. ಅಮ್ಮನ ಆ ಆನಂದಭಾಷ್ಪದ ಮುಂದೆ ಜಗತ್ತಿನ ಇತರ ವಿಷಯಗಳು, ವಸ್ತುಗಳು ತೃಣ ಸಮಾನ.. ಅಮ್ಮ ಹೇಳಿದ ಮಾತುಗಳು "ನನ್ನ ಮಕ್ಕಳು ಮುಂದೆ ಬಂದಿದ್ದೀರಾ.. ಇನ್ನಷ್ಟು ಬೆಳೆಯಬೇಕು ಕಣೋ.. ನಿನ್ನ ಅಪ್ಪ ಖುಷಿ ಪಡ್ತಾ ಇದ್ದಾರೆ" ಅಂದಾಗ ಕಣ್ಣುಗಳು ಜೋಗದ ಜಲಪಾತ.. ಆದರೆ ತಡೆದುಕೊಂಡೆ.. !!!

ಅಕ್ಕ ಆನಂದದಿಂದ ಹರಸಿದಳು, ಅಣ್ಣ ಅತ್ತಿಗೆ ಖುಷಿಯಾಗಿ ಹಾರೈಸಿದರು... ತಮ್ಮ ತನ್ನ ಮಾಮೂಲಿ ಧ್ವನಿಯಲ್ಲಿ ಆರಾಮಾಗಿ ಹೋಗಿ ಬಾ ಎಂದದ್ದು ಅಷ್ಟೇ ಅಲ್ಲದೆ, ನನ್ನ ಪರ್ಸಿನ ತೂಕ ಹೆಚ್ಚಿಸಿದ.. 

ಸರಿ.. ಆದಷ್ಟು ಹೊಟ್ಟೆಯೊಳಗಿನ ಚಿಟ್ಟೆಯನ್ನು ಹೊರಗೆ ಬಿಡಬಾರದೆಂದು.. ಮನಸ್ಸನ್ನು ಧೃಡ ಮಾಡಿಕೊಂಡಿದ್ದೆ.. ಮನಸ್ಸು ಮಂಜಿನ ಹಾಗೆ ತಣ್ಣಗೆ ಇತ್ತು.. 

ಮಗಳಿಗೆ ಮಡದಿಗೆ ಒಂದು ಅಪ್ಪುಗೆ ಕೊಟ್ಟು.. ಹೊರಟೆ.. ಇಬ್ಬರೂ ಹೇಳಿದ್ದು ಒಂದೇ ಮಾತು.. ಹುಷಾರಾಗಿ ಹೋಗಿ ಬನ್ನಿ.. ಅಲ್ಲಿ ಅದು ತನ್ನಿ ಇದು ತನ್ನಿ ಎನ್ನುವ ಬೇಡಿಕೆ ಇರಲಿಲ್ಲ.. 

ಇಬ್ಬರೂ ಒಂದು ಸುಂದರ ನಗೆ ಕೊಟ್ಟು ನನ್ನ ಬೀಳ್ಕೊಟ್ಟರು.. 

ವಾಹನ ಚಾಲಕ ನನಗೆ ತುಸು ಪರಿಚಯದವರಾಗಿದ್ದರು.. ಅದು ಗೊತ್ತಾಗಿದ್ದು.. ಕಾರಿನಲ್ಲಿ ಕೂತಮೇಲೆಯೇ.. ಮುಂದಿನ ೪೫ ನಿಮಿಷಗಳು ಮಾತುಕತೆಯಲ್ಲಿ ಕಳೆಯಿತು... ಏರ್ಪೋರ್ಟ್ ಹತ್ತಿರ ಬಂದಾಗ.. ವಾಹನ ಚಾಲಕ ನನಗೆ ಶುಭ ಕೋರಿ ನಿರ್ಗಮಿಸಿದರು.. 

ಏನು ಹೇಳಲಿ.. ಮನಸ್ಸು ಹಕ್ಕಿಯ ಹಾಗೆ ಹಾರುತ್ತಿತ್ತು.. ಮನೆಗೆ ಕರೆ ಮಾಡಿ ಹೇಳಿದೆ.. ತಲುಪಿದ್ದೇನೆ.. ಚೆಕ್ ಇನ್ ಆಗ್ತಾ ಇದೆ.. ಇನ್ನೊಂದು ಅರ್ಧಘಂಟೆ ವಿಮಾನದ ನನ್ನ ಸೀಟಿನಲ್ಲಿ ಕೂತಿರುತ್ತೇನೆ.. 

ಸವಿತಾ ಖುಷಿಯಿಂದ ನಕ್ಕಳು.. ಮಗಳು ಖುಷಿ ಪಟ್ಟಳು.. ಅಪ್ಪ ವಿಮಾನ ಹೊರಡುವ ಮೊದಲು ಕರೆಮಾಡಿ ಎಂದಳು.. 

ಇತ್ತ ಕಡೆ ನನ್ನ ತಮ್ಮ ಬೆಳಗಿನ ಜಾವ ಮೂರು ಮುಕ್ಕಾಲು ತನಕ ಕಾಯುತ್ತಾ ಕೂತಿದ್ದ.. ನೀ ವಿಮಾನದೊಳಗೆ ಹೋದಾಗ ಕರೆಮಾಡು, ಆಮೇಲೆ ನಾ ಮಲಗುತ್ತೇನೆ.. ಅವನು ನಾಲ್ಕೈದು ಬಾರಿ ಹೊರದೇಶಕ್ಕೆಹೋಗಿಬಂದಿದ್ದ .. ಅವನು ಕೊಟ್ಟ ಸಲಹೆಗಳು, ಸೂಚನೆಗಳು ನನ್ನ ಸಹಾಯಕ್ಕೆ ಬಂದಿದ್ದವು.... ಅನಾಯಾಸವಾಗಿ ಯಾವುದೇ ಆತಂಕ, ಕಳವಳವಿಲ್ಲದೆ ವಿಮಾನದೊಳಗೆ ಕೂತೆ.. 

ಸುಂದರವಾದ ಬಣ್ಣ ಬಣ್ಣದ ಆಸನಗಳು, ಪ್ರತಿ ಸೀಟಿನಲ್ಲೂ ಟಿವಿ, ನಮಗೆ ಬೇಕಾದ ಸಿನಿಮಾಗಳನ್ನು ನೋಡುವ ಅವಕಾಶ, ಆಗಾಗ ಬಂದು ಊಟ ತಿಂಡಿ ಕಾಫಿ ಪಾನೀಯಗಳನ್ನು ಕೊಡುವ ನಗುಮೊಗದ ಗಗನಸಖಿಯರು... !!!

ಪ್ರಥಮಂ ವಕ್ರತುಂಡಂಚ... ಅದ್ಭುತ ಅನುಭವಕ್ಕೆ ಮುನ್ನುಡಿಯಾಗಿ ವಿಮಾನ ಜರ್ ಅಂತ ಶುರುವಾಯಿತು.. !!!